ಟ್ರೇಪ
	ಟ್ರಪೇಸೀ ಕುಟುಂಬಕ್ಕೆ ಸೇರಿದ ಜಲಸಸ್ಯ. ಸರೋವರ, ನದಿ ಮತ್ತು ಜೌಗುಪ್ರದೇಶಗಳಲ್ಲಿ ಬೆಳೆಯುತ್ತದೆ. ಈ ಸಸ್ಯದ ಕಾಂಡದ ಭಾಗವೆಲ್ಲವೂ ನೀರಿನೊಳಗೆ ಇದ್ದು. ನೀರಿನ ಮೇಲೆ ಎಲೆ ಮತ್ತು ಹೂಗಳು ಮಾತ್ರ ಕಾಣಿಸುತ್ತವೆ. ಇದಕ್ಕೆ ಮುಳ್ಳುಕೊಂಬು ಬೀಜ, ಸಿಂಗಾರ ಬೀಜ, ನೀರಿನ ಅಕ್ರೋಟ್ ಎಂಬ ಹೆಸರುಗಳೂ ಉಂಟು. ಇದನ್ನು ಭಾರತದ ಎಲ್ಲ ಕಡೆಗಳಲ್ಲೂ ಬೆಳೆಯಲಾಗುತ್ತಿದೆ. ಕಾಶ್ಮೀರದಲ್ಲಿ ಇದರ ಬೆಳೆಹೆಚ್ಚು. ಮಲಯ, ಶ್ರೀಲಂಕಾ, ಆಫ್ರಿಕದ ಉಷ್ಣ ವಲಯ, ಯೂರೋಪ್ ಮತ್ತು ಆಗ್ನೇಯ ಏಷ್ಯಗಳಲ್ಲೂ ಇದನ್ನು ಬೆಳೆಯಲಾಗುತ್ತಿದೆ. 
ಯೂರೋಪ್ ಮತ್ತು ಏಷ್ಯದ ಕೆಲವು ಭಾಗಗಳಲ್ಲಿ ಇದರ ಬೀಜಗಳನ್ನು ಹುರಿದು ತಿನ್ನುವ ಕ್ರಮ ಇದೆ. ಹಸಿಬೀಜಗಳನ್ನೂ ತಿನ್ನುವುದುಂಟು. ಈ ಸಸ್ಯದ ಕಾಂಡ ಬಲು ಉದ್ದ, 2-5ಮೀ. ಉದ್ದವಿದೆ. ಎಲೆಗಳು ಎರಡು ತೆರನಾದವು ; 1 ನೀರಿನ ಕೆಳಗೆ ಬೆಳೆಯುವ ಎಲೆಗಳು. ಇವು ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಯ ನಡುದಿಂಡಿನ ಎರಡು ಕಡೆಯೂ ಉಪ ಎಲೆಗಳಿವೆ. 2 ನೀರಿನ ಮೇಲಿರುವ ಎಲೆಗಳು. ಇವು ಗುಲಾಬಿ ಎಸಳುಗಳಂತೆ ಜೋಡಣೆಗೊಂಡಿವೆ. ಇವುಗಳ ಅಂಚು ಗರಗಸದಂತೆ. ಎಲೆಯ ತೊಟ್ಟಿನ ತುದಿ ಸ್ಪಂಜಿನಂತೆ ಉಬ್ಬಿಕೊಂಡಿದೆ. ಹೂಗಳು ಬಹಳ ಸಣ್ಣವು. ಒಂಟಿಯಾಗಿ ಎಲೆಯ ಕಂಕುಳಲ್ಲಿ ಅರಳುತ್ತವೆ. ಪುಪ್ಪಪತ್ರಗಳು, ದಳಗಳು ಮತ್ತು ಕೇಸರಗಳು ತಲಾ ನಾಲ್ಕು. ಅಂಡಾಶಯ 2 ಕೋಣೆಗಳಿಂದ ಕೂಡಿದೆ. ಅಂಡಕ ಒಂದು. ಅಂಡಾಶಯದ ಎರಡು ಕೋಣೆಗಳ ನಡುವಣ ತಡಕೆಗೆ ಅಂಟಿಕೊಂಡಿದೆ. ಫಲ ಬುಗುರಿಯಾಕಾರದ್ದು ಒಂದು ಕೋಶದಿಂದ ಕೂಡಿದೆ. ಒಳಗೆ ಒಂದೇ ಬೀಜ ಉಂಟು. ಟ್ರೇಪದಲ್ಲಿ ನೇಟನ್ಸ್ ಮತ್ತು ಬೈಸ್ಪೈನೋಸ ಎಂಬ ಎರಡು ಪ್ರಭೇದಗಳಿವೆ. 
(ಬಿ.ಎ.ಸಿ.; ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ